Sunday, April 20, 2025

ವ್ಯತಿರಿಕ್ತ' ಕಾದಂಬರಿ

 ಜೀವನದ ಧಾವಂತದಲ್ಲಿ ನಮ್ಮನ್ನು ನಾವು ಒಂದೆಡೆ ನಿಂತು ಆತ್ಮಾವಲೋಕನಕ್ಕೆ ಆಸ್ಪದ ನೀಡಬೇಕಾಗುತ್ತದೆ. 


ನಮ್ಮ ಭಾವನೆಗೆ ಅನುಗುಣವಾಗಿ ನಾವು ಇತರರನ್ನು ಸುಲಭವಾಗಿ ಅಳೆದು ಬಿಡುತ್ತೇವೆ. ಆದರೆ ನಮ್ಮನ್ನು ನಾವು ಅರಿತುಕೊಳ್ಳಲು ಹೋಗುವುದೇ ಇಲ್ಲ. ಕಲ್ಮಷ ತುಂಬಿದ ನೀರಿನಲ್ಲಿ ಯಾವುದೇ ಬಾಹ್ಯ ಘರ್ಷಣೆ ನಿಂತ ಬಳಿಕ ಕ್ರಮೇಣ ಆ ಕಲ್ಮಷಗಳೆಲ್ಲಾ ಅಡಿಗೆ ಹೋಗಿ ಮೇಲಿನ ನೀರು ತಿಳಿಯಾಗುತ್ತದೆ. ಅದು ಬಳಸಲು ಯೋಗ್ಯವಾಗುತ್ತದೆ.


✍️ *ವಿವೇಕಾನಂದ ಕಾಮತ್* 

'ವ್ಯತಿರಿಕ್ತ' ಕಾದಂಬರಿ

Wednesday, April 9, 2025

ಪರೀಕ್ಷೆಯಲ್ಲಿ ಅಂಕ ಕಡಿಮೆ ಯಾದರೇನು?......... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ? - ಡಾ.ಶಶಿಕಿರಣ್ ಶೆಟ್ಟಿ, ಉಡುಪಿ

 PUC ರಿಸಲ್ಟ್ ಬಂದಿದೆ ಸಂತೋಷ 580,600 ಪ್ಲಸ್ ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ  ಪತ್ರಿಕೆ, ಟಿವಿ, ಯಲ್ಲೇ ಇರಲಿ, ವಾಟ್ಸಪ್ ಗ್ರೂಪ್ನಲ್ಲಿ, ಸೋಷಿಯಲ್ ಮಿಡಿಯಾ ಎಲ್ಲೇ ಇರಲಿ ಅವರ ಮಗ 600+, ಇವರ ಮಗಳು 610 ಅಂತೆ ಎನ್ನುವುದರ ನಡುವೆ, ಏನೂ ತಪ್ಪು ಮಾಡದ 50% ಮಾರ್ಕ್ ತೆಗೆದ, ಫೇಲ್ ಆದ ಮಕ್ಕಳನ್ನು ಕೇಳುವವರಿಲ್ಲ ನೋಡಿ😥😥.....

ಇನ್ನೇಷ್ಟೋ ಕಡೆ ನೀನು ವೇಸ್ಟ್ ಬಾಡಿ, ನಮ್ಮ ಮರ್ಯಾದೆ ತೆಗೆದೆ, ನಮ್ಮ ಶಾಲೆಗೆ ಕಪ್ಪು ಚುಕ್ಕೆ, ದನ ಮೇಯಿಸು, ಸಾಯ್ಬಾರದಿತ್ತಾ😥, ಅವರ ಮಗ ನೋಡು,ಇವರ ಮಗಳನ್ನು ನೋಡು ಮುಂತಾದ ಚುಚ್ಚು ನುಡಿ ಇದು ಬೆಳೆಯುವ ಸಿರಿ ಯೊಂದನ್ನು ಮೊಳಕೆಯಲ್ಲೇ ಚಿವುಟುವ ಸಮಾಜ, ಬಾಂದವರು, ಒಡಹುಟ್ಟಿದವರು, ತಂದೆ ತಾಯಿ ಒಮ್ಮೆ ಇವರ ಬಗ್ಗೆ ಯೋಚಿಸ ಬಾರದೇಕೆ??

5 ಬೆರಳು ಒಂದೇ ರೀತಿ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೇಕೆ ಅರ್ಥವಾಗುವುದಿಲ್ಲ?, ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕಾದರೆ rank ಬರುವುದು ಅನಿವಾರ್ಯವೇ? ಟಾಟಾ ಬಿರ್ಲಾ, ಅದಾನಿ, ಅಂಬಾನಿ, ಸಚಿನ್ ತೆಂಡೂಲ್ಕರ್ ನಂತಹ rank ಬಾರದ ಅದೆಷ್ಟು ಯಶಸ್ವೀ ವ್ಯಕ್ತಿ ಗಳಿಲ್ಲವೇ?...👌🙏🙏

ಬನ್ನಿ ಸ್ವಲ್ಪ ಬದಲಾಗೋಣ...

🌹1) ಕಡಿಮೆ ಅಂಕ ಬಂದ ಮಕ್ಕಳನ್ನು ಪ್ರೀತಿ ಯಿಂದ ಮಾತಾಡೋಣ

🌹2) ಅವರಲ್ಲಿ ಧೈರ್ಯ ತುಂಬೋಣ

🌹3) ಪರ್ಯಾಯ ಆಯ್ಕೆ ಗಳ ಬಗ್ಗೆ ತಿಳಿ ಹೇಳೋಣ

🌹4)ಎರಡನೇ ಯತ್ನದಲ್ಲಿ ಯಶಸ್ವೀ ಯಾದವರ ಕಥೆ ಹೇಳೋಣ..

🌹5) 1 ವರ್ಷ sslc ಮಾತ್ರ ಹೋಗಿದ್ದು ಜೀವನ ಇನ್ನೂ ಇದೆ ಎನ್ನುವ ಸತ್ಯ ತಿಳಿ ಹೇಳೋಣ..

🌹6) ಅವರಲ್ಲಿರುವ ಟ್ಯಾಲೆಂಟ್ ಅನ್ನು ಗುರುತಿಸೋಣ...


ಒಟ್ಟಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಉಪಚಾರಿಸಿ ಹೊಸರೆಕ್ಕೆ ಕಟ್ಟಿ ಆಗಸಕ್ಕೆ ಹಾರಿ ಬಿಡೋಣ 🙏🙏...

ಕೊನೆಗೊಂದು ಎಲ್ಲೊ ಓದಿದ ಕಥೆಯೊಂದನ್ನು ಹೇಳುತ್ತೇನೆ ಕೇಳಿ.. ಅಪ್ಪ ಈಗಷ್ಟೇ ತಂದ ಹೊಸ ಕಾರಿನ ಕೆಂಪು ಪೈಂಟ್ ಮೇಲೆ ಚಿಕ್ಕ ಮಗ ಕಲ್ಲಲ್ಲಿ ಏನೋ ಗೀಚುತಿದ್ದ ಸಿಟ್ಟಲ್ಲಿದ್ದ ಅಪ್ಪ ಅಲ್ಲೇ ಇದ್ದ ಕಬ್ಬಿಣದ ರೋಡ್ ಅಲ್ಲಿ ಮಗನ ಕೈಗೆ ಹೊಡೆದನಂತೆ ಮಗನ ಕೈ ಫ್ರಾಕ್ಚರ್ ಆಗಿತ್ತು🥱, ಆಸ್ಪತ್ರೆ ಗೆ ಕೊಂಡು ಹೋದರೆ ಹೊಡೆತ ಜೋರಾಗಿ ಬಿದ್ದಿದ್ದರಿಂದ ಹೆಬ್ಬೆರಳು ಪುಡಿ ಪುಡಿ ಆಗಿದ್ದು ಮಗು ವಿನ ಹೆಬ್ಬೆರಳು ಕತ್ತರಿಸಬೇಕು ಎಂದು ಬೆರಳು ಕತ್ತರಿಸಿದರಂತೆ 😥.. ಅಪ್ಪ ಬೇಸರದಿಂದ ಮನೆಗೆ ಬಂದರೆ ಕೆಂಪು ಕಾರ್ ಮೇಲೆ ಅಪ್ಪ ಈ ಲವ್ ಯು ಎಂದು ಕಲ್ಲಲ್ಲಿ ಗೀಚಿದ್ದ ಮಗ.. ಅಲ್ಲಿ ರಕ್ತ ದ ಕಲೆ ಗಳಿದ್ದವು... ಅಪ್ಪ ದುಃಖ ತಡೆಯಲಾರದೇ ಅಲ್ಲೇ ಕೂತಿದ್ದ.. ಹಿಂದೆ ನಿಂದ ಬಂದ ಮಗ ಬ್ಯಾಂಡೆಜ್ ಮಾಡಿದ್ದ ಕೈ ತೋರಿಸಿ ಹೇಳಿದನಂತೆ ಅಪ್ಪ ನೀನು ಟೆನ್ಶನ್ ತಗೋಬೇಡ ನಾನು ಬರೆಯೋದು ಎಡ ಕೈ ಯಲ್ಲಿ ಮೊನ್ನೆ ಬಲ ಕೈ ಅಲ್ಲಿ ಟ್ರೈ ಮಾಡುತಿದ್ದೆ, ಬಲ ಕೈ ಹೆಬ್ಬೆರಳು ಹೋದರೆ ಹೊಗಲಿ ಬಿಡು ಅಂದನಂತೆ😔🥱.....

ನಿಜ ಇಂತಹ ಮಕ್ಕಳ ನಿಷ್ಕಲ್ಮಶ ಪ್ರೀತಿ,ಮಮತೆ ಯನ್ನು ಅರಿಯುವ ತಂದೆ ತಾಯಿಗಳಾಗೋಣ.. ಮಾರ್ಕ್ ಕಮ್ಮಿ ಬಂತೆಂದು ಅವರ ಮುಗ್ಧ ಹೃದಯಕ್ಕೆ ನೋವು ಕೊಟ್ಟು ನಾಳೆ ಮಕ್ಕಳನ್ನು ಕಳೆದುಕೊಂಡು ಬೇಸರಿಸುವ ಮೊದಲು ಎಚ್ಚರ ದಿಂದ ಇರೋಣ.

SSLC, PUC  ಯಲ್ಲಿ ಕಡಿಮೆ ಅಂಕ ಬಂದ /ಫೇಲ್ ಆದ ಅದೆಷ್ಟೋ ವಿದ್ಯಾರ್ಥಿಗಳು ಜೀವನವೆಂಬ ಪರೀಕ್ಷೆ ಯಲ್ಲಿ ಪಾಸ್ ಆಗಿದ್ದಾರೆ, ಕೆಲವರoತು ಜೀವನದಲ್ಲಿ Rank ಬಂದಿದ್ದಾರೆ.. ಹಾಗಾಗಿ ಇದಿಷ್ಟು ನೆನಪಿರಲಿ....ಅವರಿಗೊಂದು ಅವಕಾಶ ಕೊಡಿ

ಯಾಕೆಂದರೆ....

ಪರೀಕ್ಷೆ ಯಲ್ಲಿ ಅಂಕ ಕಡಿಮೆಯಾದರೇನು?.... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ?? 🙏🙏

Saturday, October 19, 2024

ಅಮ್ಮ_ಹೆಂಡತಿ_ಮಕ್ಕಳು

"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು

ವೃಧ್ಧಾಶ್ರಮಕ್ಕೆ ಸೇರಿಸುವುದು..."


ನನ್ನ ಮನೆಯಲ್ಲಿ  ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....

ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...

ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...


ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..

ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...

ಇತ್ತೀಚೆಗೆ ಒಂದು ವರುಷದಿಂದ 

ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...

ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...

ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...


ನನಗಾದರೂ ಅವಳು

ತಾಯಿ..ನನ್ನವಳಿಗೆ ಅವಳು ತಾಯಿಯಾ..?

ನನ್ನ  ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.

ಆದರೆ  ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..

ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು....

ಆದರೆ ನನ್ನ 

ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....

ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"

ಆದರೆ ನನ್ನ ಮಗಳು ಶಿಶಿರ "ಅಬ್ಬಾ  ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...


"ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...

ಹೆಂಡತಿ ಮಕ್ಕಳೇನೋ ಸುಮ್ಮನಾದರು... 


ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...

*********

ಇಂದು ನನ್ನ ನಿವೃತ್ತಿಯ ಮೊದಲ  ದಿನ .

ಅಮ್ಮನ ಪ್ರಾಃತ ವಿಧಿಗಳನೆಲ್ಲ

ಮುಗಿಸಿ ನಾವು ಹೊರಟು ನಿಂತೆವು...


ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...


"ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ  ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.

ನಾವೆಲ್ಲರೂ ಕಾರಿನಲ್ಲಿ ಕುಳಿತೆವು.


ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.


 ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..


ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..


ಹಾರನ್ ಮಾಡಿದೆ..

ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..


ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..

"ವೃದ್ಧಾಶ್ರಮ ಅಲ್ವಾ..?" ಹೆಂಡತಿ

ಬಾಯಿ ತೆಗೆದಳು...


ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...

ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.


..ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..

"ಏನಿದು ಆವಾಂತರ... ಅತ್ತೆಯನ್ನು  ಇಲ್ಲಿ ನೋಡಿ ಕೊಳ್ಳುವವರು ಯಾರು?"

ನನ್ನವಳ ಪ್ರಶ್ನೆ..


"ಅವಳ ಮಗ  ನಾನು ಜೀವದಲ್ಲಿ ಇದ್ದೇನೆ"ನನ್ನ ಉತ್ತರ.

"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"


"ಹಾಗೆಂದು ಕೊಳ್ಳಬಹುದು" ಎಂದೆ...


"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...


"ಮನೆಯ ಖರ್ಚು ನನ್ನದೇ" ನನ್ನ ಉತ್ತರ.

"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".

"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.


"ಅಯ್ಯೋ ನೀವಿಲ್ಲದ ಮನೆಯೆ".

ಇವಳ ಕಣ್ಣಲ್ಲಿ ಗಂಗಾ ಪ್ರವಾಹ..


ಅಮ್ಮನ ಕಣ್ಣಲ್ಲಿ ಅಶ್ರುಧಾರೆ..

ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..

 ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.


ಅವಳನ್ನು ಮಂಚದ ಮೇಲೆ ಮಲಗಿಸಿದೆ...


ಮಗ, ಮಗಳು, ಇವಳು ಎಲ್ಲರು  ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ..


ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ  ಏನು  nonsence...?

ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್  ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...


ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ"."ಅಪ್ಪಾ "

ಮಗಳು  ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"


ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ

ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.

"ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಬೇಧಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.


 ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.

 ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ  ಆ  ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.


ದೇವಾ...ಇಂತಹ ಅಮ್ಮನಿಗೆ ಈಗಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.

ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃಧ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....


ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?

ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ  ಮನೆಗೆ ಬಂದು ಹೋಗುತ್ತೇನೆ....ಅಮ್ಮನಿರುವ ವರೆಗೆ ಮಾತ್ರ..."


ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ.ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.. "ಅವಳಿಗೆ ಗಾಬರಿಯಾಗಿದೆ.


"ಮಕ್ಕಳೇ "

ನಾನು ಹೇಳುತ್ತೇನೆ"ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....


ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ...ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ..ನನ್ನಮ್ಮನಿಗಾದರೂ ನಾನಿದ್ದೆ...ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ

ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ...

ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ" ಮಗ  ಕದಲಿ ಹೋದ


"ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ...ನೀವು ನಮ್ಮ ಕಣ್ಣ ತೆರೆಸಿದಿರಿ...ನಿಮ್ಮ ಅಮ್ಮನನ್ನು  ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ.."


ಮೂವರೂ  ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು  ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ".


ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ  ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..


ಇದು ಕಥೆಯಲ್ಲ..    ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.

ಬರಹ ಕೃಪೆ:   ಬರೆದವರು ಯಾರೆಂದು ತಿಳಿದಿಲ್ಲ.


ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.

🌹🌹ಒಳ್ಳೆಯ ತಿಳುವಳಿಕೆ ಕೊಡುವಂತಹ ಬರಹ, ನಮ್ಮ (Generation) ಪೀಳಿಗೆಗೆ, ಮಕ್ಕಳ ಪೀಳಿಗೆಗೆ ಹಾಗೂ ಮುಂದಿನ ಎಲ್ಲಾ ಪೀಳಿಗೆಗೂ ಅನ್ವಯವಾಗುವಂತಹ ಬರಹ. ಇದನ್ನು ಬರೆದವರಿಗೂ ಹಾಗೂ ಕಳುಹಿಸಿದವರಿಗೂ ಅನಂತ ಧನ್ಯವಾದಗಳು.

Monday, September 2, 2024

ಸಂತೃಪ್ತಿ

 ಸಂತೃಪ್ತಿ

ಕಿಕ್ಕಿರಿದ ಬಸ್ಸಿನಲ್ಲಿ ಕುಳಿತುಕೊಳ್ಳಲು ಆಸನವೇ ಇರಲಿಲ್ಲ; ಅಷ್ಟರಲ್ಲೇ ಕುಳಿತಿದ್ದ ಯಾರೋ ಒಬ್ಬ ಎದ್ದು ನಿಂತು ತನ್ನ  ಆಸನವನ್ನು ಬಿಟ್ಟು ಕೊಟ್ಟ. ಅವನು ಸ್ವಲ್ಪ ಮುಂದೆ  ತೆರಳಿ ನಿಂತನು.  ನನಗೂ ಸಾಕಾಗಿತ್ತು, ಮರು ಮಾತನಾಡದೆ  ಕುಳಿತುಕೊಂಡೆ.  ಅಷ್ಟರಲ್ಲಿ  ಮುಂದೆ  ಬಂದ ಸ್ಟಾಪ್ ನಲ್ಲಿ ಒಬ್ಬರು ಪ್ರಯಾಣಿಕರು ಇಳಿದರು.


 ಖಾಲಿಯಾದ ಆ ಸೀಟ್ನಲ್ಲಿ ನನಗೆ ಸೀಟ್ ಬಿಟ್ಟು ಕೊಟ್ಟಿದ್ದ ಆ ಪ್ರಯಾಣಿಕ ಮತ್ತೆ ಕುಳಿತನು.ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕ ಬಸ್ ಹತ್ತಿದ. ಮತ್ತೆ ಅವನು ಎದ್ದುನಿಂತು ಆ ಹೊಸಬನಿಗೆ  ಮತ್ತೆ ತನ್ನ ಆಸನವನ್ನು ಬಿಟ್ಟು ಕೊಟ್ಟನು. ಹೀಗೆಯೇ ಮುಂದಿನ ನಾಲ್ಕೈದು ನಿಲ್ದಾಣಗಳಲ್ಲಿ ಅವನು ಕುಳಿತಿರುವ ಆಸನವನ್ನು ಎಲ್ಲರಿಗೂ ನೀಡುವುದನ್ನು ಅವನು ಮುಂದುವರಿಸಿದ.


ನಾನು ಎಲ್ಲವನ್ನೂ ಗಮನಿಸುತ್ತಿದ್ದೆ, ನಾನು ನನ್ನ ಕೊನೆಯ ನಿಲ್ದಾಣದಲ್ಲಿ ಬಸ್ ಇಳಿಯುವ ಮೊದಲು ಅವನೊಂದಿಗೆ ಮಾತನಾಡಿದೆ: "ನೀನು ಕುಳಿತುಕೊಳ್ಳುವ ಬದಲು ನಿನ್ನ ಸ್ಥಾನವನ್ನು ಬೇರೆಯವರಿಗೆ ಏಕೆ ನೀಡುತ್ತಿರುವೆ?  " ನಾನು  ಕೇಳಿದೆ. 

ಅವನ ಉತ್ತರ ನನಗೆ ಆಶ್ಚರ್ಯ ತಂದಿತು.  "ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು. ಯಾರಿಗೂ ಯಾವುದೇ ರೀತಿಯಲ್ಲಿ ಸಹಾಯಯಾಗಲಿ,    ಹಣ ಸಹಾಯ ವಾಗಲಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಇದನ್ನು ಪ್ರತಿದಿನ ಮಾಡುತ್ತಿದ್ದೇನೆ. ಈ ಕೆಲಸ ತುಂಬಾ ಸುಲಭ" ಎಂದನು. 

ಮುಂದುವರಿದು ನುಡಿದ. "ನಾನು ಸೀಟು ಕೊಟ್ಟಾಗ ನನಗೆ ಪ್ರತಿಯಾಗಿ ಧನ್ಯವಾದ ಸಲ್ಲಿಸುತ್ತಾರೆ, ನಾನು ಯಾರಿಗೂ ಏನನ್ನೂ ಕೊಡಲಾಗದ ಪರಿಸ್ಥಿತಿಯಲ್ಲಿದ್ದೇನೆ, ಈ ತೃಪ್ತಿಯೇ ನನಗೆ ಸಾಕು.  ಆ ತೃಪ್ತಿಯಿಂದ ನಾನು ಆರಾಮವಾಗಿ ಮಲಗುತ್ತೇನೆ" ಎಂದನು.

ನನಗೆ  ಮಾತೇ ಹೊರಡಲಿಲ್ಲ.!

ನಾವು ಬೇರೆಯವರಿಗೆ ಕೊಡಬೇಕೆಂದರೆ ನಮ್ಮ ಬಳಿ ಏನೂ ಇಲ್ಲದಿದ್ದರೂ ಯಾವುದಾದರೊಂದು ರೂಪದಲ್ಲಿ ಕೊಡಬಹುದು ಎಂಬುದನ್ನು ಅವನಿoದ ಕಲಿತೆ.  ನಾವು ಶ್ರೀಮಂತರು ಮತ್ತು ಸ್ಥಿತಿ ವಂತರಾಗಿದ್ದರೆ  ಮಾತ್ರ ನಾವು ಇನ್ನೊಬ್ಬರಿಗೆ ಏನನ್ನಾದರೂ ನೀಡಬಹುದು ಎಂದು ಯೋಚಿಸುವುದು ತಪ್ಪು.  

 ಏನನ್ನಾದರೂ, ಯಾವುದೇ ರೂಪದಲ್ಲಿದಾರೂ ಸರಿ ಕೊಡುವ ಹೃದಯವುಳ್ಳ ಯಾರಾದರೂ ಸರಿಯೇ, ಅವರು "ಶ್ರೀಮಂತರು" ಯಾರಿಗಾದರೂ ನಮ್ಮ ಕೈಲಾದ ಏನನ್ನಾದರೂ ನೀಡುವ "ತೃಪ್ತಿ" ಬೇರೆ ಯಾವುದರಲ್ಲಿಯೂ ಬರುವುದಿಲ್ಲ. 

(ಸಂಗ್ರಹ ಮಾಹಿತಿ.)

Thursday, August 22, 2024

ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ. ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ........ 1990 ಕ್ಕಿಂತ ಮೊದ - ಕೃಪೆ ವಾಟ್ಸಪ್,

ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ. ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ........ 

1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು..... 

ಆಗ ದೇಶದ ಸುಮಾರು ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ ಕಷ್ಟವಾಗಿತ್ತು. ಬೆಳಗ್ಗೆ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತಿದ್ದರು. ಕೆಲವರಿಗೆ ಅದೂ ಸಿಗುತ್ತಿರಲಿಲ್ಲ.

 ಬಡವರು ಅಂದಿನ ಕೂಲಿ ಹಣದಲ್ಲಿ ಅಂದೇ ರಾಗಿ ಜೋಳ ಗೋದಿ ತಂದು ಅದನ್ನು ಪುಡಿ ಮಾಡಿಸಿ ಊಟ ಮಾಡಬೇಕಿತ್ತು......

 

ಗಮನಿಸಿ ,

ಅಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು.

" ಹಬ್ಬದಲ್ಲಿ ಅನ್ನ ಊಟ ಮಾಡಿದಂತೆ "   ಅಂದರೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು. ಉಳಿದಂತೆ ಮುದ್ದೆ ರೊಟ್ಟಿ ಮತ್ತು ಗೊಜ್ಜು.

ತರಕಾರಿಗಳು, ಬೇಳೆಗಳು, ಹಣ್ಣುಗಳು ಕೇವಲ ಕೆಲವೇ ಶ್ರೀಮಂತರು ಮಾತ್ರ ಉಪಯೋಗಿಸುತ್ತಿದ್ದರು. ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಕರ್ಜೂರ ಬಹಳ ಜನ ನೋಡೇ ಇರಲಿಲ್ಲ. ಬನ್ನು, ಬ್ರೆಡ್ಡು ಕೇವಲ ಜ್ವರ ಬಂದಾಗ ಮಾತ್ರ ಕೊಡುತ್ತಿದ್ದರು. ಬನ್ನು ತಿನ್ನುವ ಸಲುವಾಗಿ ಜ್ವರ ಬರಲಿ ಎಂದು ಎಷ್ಟೋ ಜನ ಬಯಸುತ್ತಿದ್ದುದು ಉಂಟು..... 

ಒಂದು ಕೆಜಿ ಕಡಲೆಕಾಯಿ ಎಣ್ಣೆ, ಒಂದು ಕೆಜಿ ಸಕ್ಕರೆ ಇಡೀ ತಿಂಗಳಲ್ಲಿ ಖರ್ಚು ಮಾಡಿದರೆ ಅದೇ ಹೆಚ್ಚು. ಇನ್ನು ಶುಗರ್, ಬಿಪಿ, ಕೊಲೆಸ್ಟರಾಲ್ಇರುವುದಾದರೂ ಎಲ್ಲಿಂದ.

ಬೊಂಡ, ಬಜ್ಜಿ, ವಡೆ, ಚಕ್ಕುಲಿಗಳೇ ಭಕ್ಷ್ಯ ಭೋಜನ. ಹೋಳಿಗೆ, ಪಾಯಸ, ಕಜ್ಜಾಯ, ಕಡುಬು ಮುಂತಾದ ಸಿಹಿ ತಿನಿಸುಗಳು ಕೆಲವೇ ವಿಶೇಷ ಹಬ್ಬಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಲು, ತುಪ್ಪ ಹಳ್ಳಿಯಲ್ಲೇ ತಯಾರಾದರೂ ಸ್ವಂತಕ್ಕೆ ಉಪಯೋಗಿಸುತ್ತಿದ್ದುದು ತುಂಬಾ ಕಡಿಮೆ. ಅದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಇದು ಸಾಮಾನ್ಯ ಜನರ ಜೀವನ ಶೈಲಿ.

ಇನ್ನು ಬಡವರ ಸ್ಥಿತಿ ವರ್ಣಿಸಲು ಹೋದರೆ ಅಳು ತಡೆಯಲಾಗುವುದಿಲ್ಲ. ಅದನ್ನು ಮತ್ತೊಮ್ಮೆ ಹೇಳುತ್ತೇನೆ.... 

ಈಗಿನ ಜೀವನ ಶೈಲಿ ಅಂದರೆ 1990 ನಂತರ ಹುಟ್ಟಿದವರದು ಹೇಗಿದೆ ನೋಡೋಣ... 

ಬೆಳಗ್ಗೆ ಬೆಡ್ ಕಾಫಿಯಿಂದ ಶುರುವಾಗಿ breakfast - lunch - evening snack - dinner ಮತ್ತು ಆಗಾಗ ಕುರುಕಲು ತಿಂಡಿ ಅವರ ದಿನನಿತ್ಯದ ಆಹಾರ.

ಇಂದು ಸಿಹಿ ತಿನಿಸುಗಳು - ಮಾಂಸಾಹಾರ - ವಿವಿಧ ರೀತಿಯ ಪಾನೀಯಗಳು ಮುಂತಾದವು ಬಯಸಿದಾಗ ತಿನ್ನಬಹುದು.   ದ್ರಾಕ್ಷಿ - ಗೋಡಂಬಿ - ಬಾದಾಮಿ ಮುಂತಾದ ಪದಾರ್ಥಗಳನ್ನು ಉಪ್ಪಿಟ್ಟು, ಕೇಸರಿಬಾತ್, ವಾಂಗಿಬಾತ್, ಚಿತ್ರಾನ್ನ, ಪಾಯಸ ಎಲ್ಲದರಲ್ಲೂ ಉಪಯೋಗಿಸುತ್ತಾರೆ.

ಅಂದಿನ ಬಹುದೊಡ್ಡ ಸಮಾರಂಭಗಳೆಂದರೆ ಕೇವಲ ಮದುವೆ ಮಾತ್ರ ಆಗಿತ್ತು.....

 

ಆದರೆ ಈಗ,

1.       Engagement,

2.       Marriage,

3.       Reception,

4.       Naming ceremony,

5.       Birthday party,

6.       Kitty party,

7.       Bachelor party,

8.       Marriage anniversary,

9.       Get together.

ಅಬ್ಬಾ,

party ಗೊಂದು ನೆಪ ಸಿಕ್ಕರೆ ಸಾಕು ಮತ್ತು ಅದರಲ್ಲಿ ಎಲ್ಲಾ ರೀತಿಯ ಭಕ್ಷ್ಯ ಭೋಜನ ಮತ್ತು ಪಾನೀಯ ಕಡ್ಡಾಯ. ಕಾರಣಕ್ಕಾಗಿ ದೈಹಿಕ ಶ್ರಮ ಕಡಿಮೆಯಾಗಿ ಸಹಜವಾಗಿ ಖಾಯಿಲೆಗಳು ಹೆಚ್ಚಾಗುತ್ತಿದೆ.....

 ಎಷ್ಟೊಂದು ವ್ಯತ್ಯಾಸ. ಅಂದಿಗೂ ಇಂದಿಗೂ. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಬದಲಾವಣೆಗಳು ನಿಮ್ಮ ಮನದಲ್ಲಿ ಮೂಡುತ್ತದೆ.....

ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಅದರ ದಿಕ್ಕನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಾ ಜೀವನಮಟ್ಟ ಸುಧಾರಿಸಿಕೊಳ್ಳೋಣ ಎಂದು ಆಶಿಸುತ್ತಾ..... 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


Saturday, January 27, 2024

ನುಡಿಮುತ್ತು.

 "'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ 

ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.''  - ಬೆಳಗೆರೆ ಕೃಷ್ಣಶಾಸ್ತ್ರಿ


Monday, December 11, 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ,

ಮಾನ್ಯ  ಮುಖ್ಯಮಂತ್ರಿಗಳು

ಕರ್ನಾಟಕ   ಸರ್ಕಾರ.

 ಮಾನ್ಯ   ಅರಣ್ಯ  ಸಚಿವರು

ಕರ್ನಾಟಕ  ಸರ್ಕಾರ .

ಮತ್ತು

ಹಿರಿಯ ಅರಣ್ಯ   ಅಧಿಕಾರಿಗಳು.

ಕರ್ನಾಟಕ   ಸರ್ಕಾರ .

 

ಯಿಂದಾ,

ಕಾಡಿನ   ಆನೆಗಳು.

 

ಮಾನ್ಯರೆ,

ಇತ್ತೀಚೆಗೆ   ನಮ್ಮ   ಗುಂಪಿನ  ಆನೆಯೊಂದನ್ನು   ಸೆರೆ  ಹಿಡಿಯುವ   ಕಾರ್ಯಾಚರಣೆಯಲ್ಲಿ  ಆನೆ  ಮರಣಿಸಿರುವುದು   ತಮ್ಮ  ಗಮನಕ್ಕೆ  ಬಂದಿದೆ   ಎಂದು  ಭಾವಿಸುತ್ತೇವೆ.   ಅಂತಹುದೇ   ಕಾರ್ಯಾಚರಣೆಯಲ್ಲಿ  ಮನುಷ್ಯರು   ಸೆರೆ  ಹಿಡಿದು   ಹಿಂಸಿಸಿ   ಸಾಕಿಕೊಂಡು  "ಅರ್ಜುನ"   ಎಂದು ಹೆಸರಿಟ್ಟುಕೊಂಡಿದ್ದ  ಆನೆಯೂ  ಮರಣಿಸಿದೆಯಷ್ಟೆ.

ಅದಕ್ಕಾಗಿ   ತಾವು ಸಂತಾಪ  ವ್ಯಕ್ತಪಡಿಸಿರುವ   ಸಂಗತಿ ತಿಳಿಯಿತು.  ತಮ್ಮ  ಸೂಕ್ಷ್ಮತೆಗೆ  ಅಭಾರಿಗಳಾಗಿದ್ದೇವೆ.

 ಮನುಷ್ಯ  ಲೋಕದ ತಾರತಮ್ಯದ ರೂಡಿಯಂತೆ  ಎರಡೂ  ಆನೆಗಳ   ಸಾವಿನ  ಬಗ್ಗೆಯೂ  ತಾರತಮ್ಯ ದಿಂದ  ಪ್ರತಿಕ್ರಿಯಿಸಿರುವುದು   ವಿಷಾದನೀಯ.

 ಕಾಡಿನ  ಆನೆಗಳಾದ   ನಮ್ಮ  ಬದುಕು   ಇಂದು   ಅತ್ಯಂತ  ಸಂಕಷ್ಟದಲ್ಲಿದೆ.   ನಾವು  ಒಡಾಡಿಕೊಂಡಿದ್ದ  ಬಹಳಷ್ಟು   ಪ್ರದೇಶಗಳು   ಕೃಷಿಗಾಗಿ,   ರಸ್ತೆಗಳ   ನಿರ್ಮಾಣಕ್ಕಾಗಿ,   ವಿವಿಧ   ಅಭಿವೃದ್ಧಿ  ಹೆಸರಿನ  ಯೋಜನೆಗಳಿಗಾಗಿ  ಬಳಸಲ್ಪಟ್ಟಿವೆ.   ನಾವು  ಓಡಾಡುತ್ತಿದ್ದ

ದಾರಿಗಳಲ್ಲಿ   ಬೇಲಿಗಳು   ನಿರ್ಮಾಣವಾಗಿವೆ.  ನಮ್ಮ  ಕಾಡಿನ  ಪ್ರದೇಶವು   ನಿರಂತರವಾಗಿ  ಕಡಿಮೆಯಾಗುತ್ತಿರುವುದರಿಂದ    ನಮ್ಮ   ಗುಂಪುಗಳು   ಅನಿವಾರ್ಯವಾಗಿ   ಆಹಾರ ಹುಡುಕುತ್ತಾ   ಕೃಷಿ  ಪ್ರದೇಶಗಳಿಗೆ  ಬರುವಂತಾಗುತ್ತಿದೆ.   ಇದು   ಅಲ್ಲಿ ವಾಸಮಾಡುತ್ತಿರುವ  ಮನುಷ್ಯರು   ಮತ್ತು  ನಮ್ಮ  ನಡುವಿನ ಸಂಘರ್ಷಕ್ಕೆ   ಕಾರಣವಾಗುತ್ತಿದೆ.  ಇದು  ನಮ್ಮವರ  ಮತ್ತು   ಮನುಷ್ಯರ  ಜೀವನಷ್ಟಕ್ಕೆ   ಕಾರಣವಾಗುತ್ತಿದೆ.

 

ಮನುಷ್ಯರಂತೆಯೇನಾವು  ಆನೆಗಳೂ  ಮತ್ತು   ಎಲ್ಲಾ  ಜೀವಿಗಳಿಗೂ  ಕೂಡ    ಭೂಮಿಯ ಮೇಲೆ ಬದುಕುವ  ಹಕ್ಕು   ಇದೆ ಎಂಬುದನ್ನು  ತಾವುಗಳು   ಒಪ್ಪುತ್ತೀರಿ    ಎಂದು   ಭಾವಿಸುತ್ತೇವೆ.

ಅಂತೆಯೇ   ಕಾಡಿನಲ್ಲಿ  ಸ್ವಾತಂತ್ರ್ಯವಾಗಿ  ಬದುಕಿರುವ   ನಮ್ಮನ್ನು  ಬಲಾತ್ಕಾರವಾಗಿ  ಬಂಧಿಸಿ    ಹಿಂಸಿಸಿ   ಪಳಗಿಸಿಕೊಂಡು  ನಿಮ್ಮ   ಕೆಲಸಗಳಿಗಾಗಿ  ಆಡಂಬರದ  ಮೆರವಣಿಗೆಗಳಿಗಾಗಿ   ಬಳಸಿಕೊಳ್ಳುವುದು   ನಮ್ಮ   ಬದುಕುವ   ಹಕ್ಕಿನ  ಸ್ಪಷ್ಟ   ಉಲ್ಲಂಗನೆಯಾಗಿದೆ.

 

  ಎಲ್ಲಾ   ಸಮಸ್ಯೆಗಳಿಗೂ   ಶಾಶ್ವತ   ಪರಿಹಾರ   ರೂಪಿಸಬೇಕೆಂದು  ಮೂಲಕ   ವಿನಂತಿಸುತ್ತಿದ್ದೇವೆ.

 

ನಮ್ಮ   ಹಕ್ಕೊತ್ತಾಯಗಳು. 

*  ಕಾಡಿನಲ್ಲಿ   ನಾವು ವಾಸಿಸುತ್ತಿರುವ   ಪ್ರದೇಶಗಳನ್ನು  ನಮಗಾಗಿ  ಮತ್ತು ಇತರ   ಕಾಡಿನ ಜೀವಿಗಳಿಗಾಗಿ  ಬಿಟ್ಟುಕೊಡಬೇಕು. 

*ನಾವು  ವಾಸಿಸುವ   ಮತ್ತು  ಆಹಾರಕ್ಕಾಗಿ  ಓಡಾಡುವ    ದಾರಿಗಳನ್ನು   ಗುರುತಿಸಿ,      ಪ್ರದೇಶದಲ್ಲಿ   ಕೃಷಿ   ಮಾಡಿಕೊಂಡು   ಬದುಕುತ್ತಿರುವ  ರೈತ    ಜಮೀನುಗಳನ್ನು    ಸೂಕ್ತ   ಬೆಲೆ  ನೀಡಿ   ಕೊಂಡುಕೊಂಡು  ಕಾಡಿಗೆ  ಸೇರಿಸಬೇಕು.

 *ನಾವು   ವಾಸಿಸುತ್ತಿರುವ   ಪ್ರದೇಶದಲ್ಲಿ   ಯಾವುದೇ  ಅಭಿವೃದ್ಧಿ  ಯೋಜನೆಗಳನ್ನು   ಕೈಗೊಳ್ಳುವುದನ್ನು   ನಿಲ್ಲಿಸಬೇಕು.

 *   ನಾವು  ವಾಸಿಸುವ   ಆಸುಪಾಸಿನಲ್ಲಿ  ಇರುವ   ಜನರಿಗೂ   ನಮಗೂ  ಸಂಘರ್ಷ ವಾಗದಂತೆ  ಸೂಕ್ತ   ಮುನ್ನೆಚ್ಚರಿಕೆ   ಕ್ರಮಗಳನ್ನು  ಕೈಗೊಳ್ಳಬೇಕು

*  ನಮ್ಮನ್ನು  ಸೆರೆಹಿಡಿದು   ಹಿಂಸಿಸಿ   ಪಳಗಿಸುವ  ಪರಿಪಾಟವನ್ನು  ಸೂಕ್ತ  ಕಾನೂನು   ರೂಪಿಸುವ   ಮೂಲಕ  ತಡೆಗಟ್ಟಿ    ನಮ್ಮ   ಬದುಕುವ   ಹಕ್ಕನ್ನು   ಖಾತರಿಗೊಳಿಸಬೇಕು

*ನಮ್ಮನ್ನು   ಕೆಲಸಕ್ಕಾಗಿ,   ಮೆರವಣಿಗೆಗಳಿಗಾಗಿ   ಮತ್ತು   ಮನರಂಜನೆಗಾಗಿ   ಬಳಸುವುದನ್ನು   ನಿಷೇಧಿಸಬೇಕು.

 ಪರಿಸರ  ಪ್ರವಾಸೋದ್ಯಮದ  ಹೆಸರಲ್ಲಿ  ನಮ್ಮ   ಪ್ರದೇಶಕ್ಕೆ  ಬಂದು   ತೊಂದರೆ ನೀಡುವುದನ್ನು  ನಿಲ್ಲಿಸಬೇಕು.   ನಮಗೂ  ಸ್ವತಂತ್ರ್ಯ ವಾಗಿ   ಬದುಕುವ  ಹಕ್ಕು   ಇದೆ   ಎಂಬುದನ್ನ   ಗೌರವಿಸಬೇಕು

  ನಮ್ಮ      ಎಲ್ಲಾ   ಹಕ್ಕೊತ್ತಾಯಗಳನ್ನು    ಪರಿಗಣಿಸಿ    ಸೂಕ್ತ   ಕ್ರಮ  ಕೈಗೊಳ್ಳಬೇಕೆಂದು      ಮೂಲಕ  ಒತ್ತಾಯಿಸುತ್ತಿದ್ದೇವೆ.

 

ಇಂತಿ   ತಮ್ಮ  ಸಹಜೀವಿಗಳಾದ

ಕಾಡಿನ  ಆನೆಗಳು.

 

(   ನಮ್ಮ   ಮನವಿಯನ್ನು  ಸರ್ಕಾರಕ್ಕೂ   ಮತ್ತು   ನಮ್ಮ   ಪರವಾಗಿ ಚಿಂತಿಸುವವರ  ಗಮನಕ್ಕೂ  ತರಬೇಕಾಗಿ  ವಿನಂತಿ.

  ಬೆರಳಚ್ಚಿಸಿದವರು.  - ಗುರುಮೂರ್ತಿ  ಜೋಗಿಬೈಲು. )


ವ್ಯತಿರಿಕ್ತ' ಕಾದಂಬರಿ

 ಜೀವನದ ಧಾವಂತದಲ್ಲಿ ನಮ್ಮನ್ನು ನಾವು ಒಂದೆಡೆ ನಿಂತು ಆತ್ಮಾವಲೋಕನಕ್ಕೆ ಆಸ್ಪದ ನೀಡಬೇಕಾಗುತ್ತದೆ.  ನಮ್ಮ ಭಾವನೆಗೆ ಅನುಗುಣವಾಗಿ ನಾವು ಇತರರನ್ನು ಸುಲಭವಾಗಿ ಅಳೆದು ಬಿಡು...