ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, August 8, 2014

ಹರಕು - ಮುರುಕು - ಶರತ್ ಚಕ್ರವರ್ತಿ


ಇತ್ತಿಚೆಗೆ ವಾಟ್ಸ್ ಆಪ್ ಅಲ್ಲಿ ಒಂದ್ ವಿಡಿಯೋ ಬಂತು. ಅದ್ರಲ್ಲಿ ಬ್ರಿಗೆಡ್ ಕಾಲೇಜ್ ವಿದ್ಯಾರ್ಥಿಗಳು 'ಬಕ್ರಾ' ಮಾಡುವಂತಹ ಹಾಸ್ಯ ದೃಶ್ಯ ಇತ್ತು. ರಸ್ತೆ ಬದಿ ಬಸ್ ಕಾಯ್ತಾ ನಿಂತಿದ್ದ ನಡು ವಯಸ್ಸಿನ ವ್ಯಕ್ತಿ ಹತ್ರ ಹೋಗಿ ಇಂಗ್ಲೀಷಿನಲ್ಲಿ ಬ್ರಿಗೇಡ್ ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಂತ ಮೈಕ್ ಚಾಚ್ತಾನೆ. ಆ ವ್ಯಕ್ತಿ ತನಗೆ ಗೊತ್ತಿರೋ ಅರೆ ಬರೆ ಇಂಗ್ಲೀಷ್ನಲ್ಲಿ 'ಯಾ ಯಾ ಕಾಲೇಜ್ ಈಸ್ ಗುಡ್, ಸ್ಟೂಡೆಂಡ್ ಈಸ್ ಗುಡ್, ಬ್ರಿಲಿಯಂಟ್....' ಹೀಗೆ ಏನೋ ಒಂದು ಹೇಳಿ ಸುಮ್ಮನಾಗ್ತಾನೆ. ಅಷ್ಟಕ್ಕೆ ಬಿಡದ ಆ ವಿದ್ಯಾರ್ಥಿಗಳು ಅವನನ್ನ ಇನ್ನಷ್ಟು ಹುಚ್ಚು ಪ್ರಶ್ನೆಗಳನ್ನ ಅವರ ಸ್ಟಾಂಡರ್ಡ್ ಇಂಗ್ಲೀಷ್ನಲ್ಲಿ ಕೇಳಿ ತಬ್ಬಿಬ್ಬು ಮಾಡುತ್ತಾನೆ. ಅತ್ತ ಕೇಳಿದ ಪ್ರಶ್ನೆನು ಅರ್ಥವಾಗ್ದೆ, ಇತ್ತ ಇಂಗ್ಲೀಷ್ ಬರಲ್ಲ ಹೇಳೋಕು ಆಗ್ದೆ ಆ ವ್ಯಕ್ತಿ ಪೇಚಾಡ್ತ ಹೇಗಾದ್ರ ಮಾಡಿ ತಪ್ಪಿಸ್ಕೊಂಡ್ರೆ ಸಾಕು ಅನ್ನೋ ಹಾಗೆ ದಿಸ್ ದಟ್ ಗೋಯಿಂಗ್ ನೈಸ್ ಅಂದ್ಕೊಂಡು ಅಲ್ಲಿ ಕಾಲ್ಕೀಳೋಕೆ ನೋಡ್ತಾನೆ. ಅವನ ಇಂಗ್ಲೀಷನ್ನ ಎಂಜಾಯ್ ಮಾಡೋಕೆ ಶುರು ಮಾಡ್ಕೊಂಡ ಆ ವಿದ್ಯಾರ್ಥಿಗಳು ಅವನ ಬೆನ್ನತ್ತಿ ಸಾಕಾಷ್ಟು ರೋಸಿಕೊಳ್ಳುತ್ತಾರೆ. ನೋಡಲು ತುಂಬಾ ಫನ್ನಿ ಆಗಿರೋ ಈ ವಿಡಿಯೋ ನಗಿಸುತ್ತದೆ ನಿಜ.
ಆದರೆ...
ಇಂಗ್ಲೀಷ್ ಬಾರದೇ ಇರೋದು ನಮ್ಮನ್ನು ಈ ಮಟ್ಟಿಗಿನ ಅಪಹಾಸ್ಯಕ್ಕೆ ಗುರಿ ಮಾಡುತ್ತದೆಯೇ ಎಂಬುದು ಯೋಚಿಸಬೇಕಾದ ವಿಚಾರ. ಇಂಗ್ಲೀಷ್ ಬರದವನನ್ನು ಪೆಂಗ-ಮಂಗನ ರೀತಿಯಲ್ಲಿ ನೋಡಿದ ಆ ವಿದ್ಯಾರ್ಥಿಗಳ ತಪ್ಪೋ.. ಅಥವಾ ನನಗೆ ಇಂಗ್ಲೀಷ್ ಗೊತ್ತಿಲ್ಲ. ಕೇಳೋದೇನಿದ್ರು ಕನ್ನಡದಲ್ಲಿ ಕೇಳಿ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳದೆ ಕೊನೆವರಗೂ ಬಟ್ಲರ್ ಇಂಗ್ಲೀಷ್ನಲ್ಲೆ ಮಾನ ಮುಚ್ಚಿಕೊಳ್ಳಲು ಯತ್ನಿಸಿದ ಆ ವ್ಯಕ್ತಿಯ ತಪ್ಪ..? (ಇಂತಹ ವ್ಯಕ್ತಿ ನಾವು ಕೂಡ ಆಗಿರಬಹುದು, ಅವನು ನಮ್ಮ ಪ್ರತಿನಿಧಿ ಅಷ್ಟೆ)
ಇಂತಹ ಪರಿಸ್ಥಿತಿ ಇಂದ ನಮ್ಮ ನಾಡಿನಲ್ಲೇ ನಾವು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದೇವೆ. ಒಪ್ಪಿಕೊಳ್ತಿನಿ ಇಂಗ್ಲೀಷ್ ಅವಶ್ಯಕ. ಆದ್ರೆ ಅನಿವಾರ್ಯ ಅಲ್ಲ.

--------------

ಮತ್ತೊಂದು ಮುಖ್ಯವಾದ್ದು...

ಹಳ್ಳಿ ಇಂದ ಬಂದ ನಾನು ಮಾತನಾಡುವಾಗ 'ಹಾ'ಕಾರ ಮತ್ತು 'ಆ'ಕಾರಗಳ ಕಡೆ ಅಷ್ಟೊಂದು ಗಮನ ಹರಿಸುವುದಿಲ್ಲ. ಹಾಸನ ಎಂಬುದರ ಬದಲು ಆಸನ ಎಂದೇ ಹೇಳಿರುತ್ತೇನೆ. ಇದನ್ನು ಒಂದು ಮಹಾಪರಾಧ ಅಥವಾ ದೊಡ್ಡ ಕಾಮಿಡಿ ಎಂಬಂತೆ ಹಲವರು ಎಂಜಾಯ್ ಮಾಡುವುದ್ದನ್ನು ನೋಡಿ 'ಅಲೆಲೆ ಮೂರ್ಖ ಬಡ್ಡಿಮಕ್ಳ' ಅಂದ್ಕೊಂಡಿದಿನಿ. ಇನ್ನು ಕರವೇ ನಾರಾಯಣಗೌಡರ ವಿಚಾರದಲ್ಲೂ ಹಲವರು ಇದೇ ವಿಚಾರಕ್ಕೆ ಆಡಿಕೊಳ್ಳುವುದ ನೊಡಿದ್ದೇನೆ.
ನನ್ನೂರಲ್ಲಿ ಮಾತಾಡೋ, ಅಲ್ಲಿನ ಮಣ್ಣಿನ ಭಾಷೆಯನ್ನ ಯಥಾವತ್ತಾಗಿ ಮೈಗೂಡಿಸಿಕೊಂಡಿರೋ ನಾನು ಅಲ್ಲಿ ಚಾಲ್ತಿಯಲ್ಲಿರೋ ಲಯ, ಸ್ವರಗಳನ್ನೇ ತುಂಬಿಕೊಂಡು ಭಾಷೆ ಕಲಿತ್ತಿದ್ದೇನೆ. ಒಂದು ಉದಾಹರಣೆ ಅಂದ್ರೆ ನಮ್ಮೂರಲ್ಲಿ (ಹಾಸನದ ಹಳ್ಳಿಗಳಲ್ಲಿ) ಹೋಗು ಅಥವಾ ಹೋಗಲೋ ಅನ್ನೋಕೆ 'ವೋಗ್ಲಾ' ಅಂತಾನೇ ಅನ್ನೋದು. ಅಲ್ಲಿನ ಬಹುಪಾಲು ಜನ ಹೀಗೆನೇ ಮಾತಾಡ್ತರೆ. ಅಲ್ಲಿ ಹುಟ್ಟಿ ಮಗುವಾದ ನಾನು ಅದನ್ನೆ ಬಳಸುತ್ತಿದ್ದೇನೆ. ಭಾಷೆ ವಾತಾವರಣದ ಸೊಗಡಿ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ ಅನ್ನೋದು ನಿಜ ಆಗಿದ್ರೆ, ಪ್ರತಿ 30 ಕಿಮಿಗೂ ಭಾಷೆ ಲಯ ಮತ್ತು ಸ್ವರೂಪ ಬದಲಾಗುತ್ತೆ ಅನ್ನೋದು ನಿಜ ಆದ್ರೆ ನನ್ನ ಮಾತಲ್ಲಿ ಬರೋ 'ಹಾ'ಕಾರ 'ಆ'ಕಾರ ತಪ್ಪಲ್ಲವೇ ಅಲ್ಲ. ಅದು ಭಾಷಾ ಸೊಗಡು.
*ಇನ್ನು ಲಿಪಿ ಎಲ್ಲ ಕಡೆ ಒಂದೇ ಆಗಿರುವುದರಿಂದ ಬರವಣಿಗೆಯಲ್ಲಿ ಅಂತಹ ವ್ಯತ್ಯಾಸಗಳೇನು ಆಗುವುದಿಲ್ಲ.
ಒಂದಷ್ಟು ಉದಾಹರಣೆಗಳು
ಮಂಗಳೂರು ಅಥವಾ ಕರಾವಳಿ ಕಡೆ ಹೋದರೆ 'ಯಂತ ಮರಾಯ, ಯಂತ ಮಾಡುದೀಗಾ' ಅಂದ್ರೆ ಯಂತ ಅಲ್ಲ ಕಣೋ ಏನು ಮಾಡೋದು ಅಂತ ಕೇಳು ಭಾಷೆ ಬರದವ್ನೆ ಅಂತ ಬೈಯ್ಯೋಕಾಗುತ್ತಾ..?
ಕುಂದಪ್ರಾ ಭಾಷೆ ಬೆಂಗಳೂರಿನ ಭಾಷೆಗೆ ಸಂಪೂರ್ಣ ಭಿನ್ನವಾದ ಸೊಗಡಿಂದ ಕೂಡಿದೆ. 'ಸಂತಿಗ್ ಹ್ವಾಯ್ಕ್' ಅನ್ನೋದ್ನ ಸಂತೆಗೆ ಹೋಗ್ತಿನಿ ಅಂತ ತಿದ್ದಿ ಹೇಳಿದ್ರೆ ಅಂದ್ರೆ ಭಾಷಾ ವಿದ್ವಾಂಸ್ರಾಗ್ತಿವ.
ಕೋಲಾರದವ್ರು 'ಮಾಡಿದಿವಿ' ಅನ್ನೋದ್ರು ಬದ್ಲು 'ಮಾಡಿದಿರಿ' ಅಂತಾನೇ ಹೇಳ್ತಾರೆ. ಊಟ ಮಾಡಿದ್ರಾ ಅನ್ನೋಕೆ ಊಟ್ಗಳು ಅಂತಾರೆ. ವ್ಯಾಕರಣ ಓದ್ಕೊಂಡ್ ಬಂದು ಇದುನ್ನ ತಪ್ಪು ಅಂತಿರಾ.

ಇಂತಹ ಅದೆಷ್ಟೋ ಉದಾಹರಣೆಗಳು ಸಿಕ್ತವೆ. ಭಾಷೆಯ ಮೂಲ ಶಬ್ದ ಆಗಿರುತ್ತೋ ಹೊರತು ವ್ಯಾಕರಣ ಅಥವಾ ಸ್ವರ ವ್ಯಂಜನಗಳಾಗಿರೋದಿಲ್ಲ. ಅಲ್ಲವಾ..?

 ಶರತ್ ಚಕ್ರವರ್ತಿ





1 comment: