ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, May 7, 2013

ಕೃತಜ್ಞತೆ - ಗುರುರಾಜ ಕರ್ಜಗಿ,


ಗಾಂಧೀಜಿ ಪುಣೆಯ ಯೆರವಡಾ ಜೈಲಿನಲ್ಲಿದ್ದಾಗ ಒಂದು ದಿನ ಅವರಿಗೊಂದು ಪತ್ರ ಬಂದಿತು. ದಿನಾಲೂ ಗಾಂಧೀಜಿಗೆ ಪತ್ರಗಳು ಬರುವುದು ಸಾಮಾನ್ಯವಾದ ವಿಷಯವಾಗಿದ್ದರೂ ಈ ಪತ್ರ ವಿಶೇಷವಾಗಿತ್ತು. ರಣಛೋಡದಾಸರೆಂಬವರು ಬರೆದ ಈ ಪತ್ರದಲ್ಲಿ ಎಂಭತ್ತೆಂಟು ಪ್ರಶ್ನೆಗಳಿದ್ದವು.  ಪ್ರತಿಯೊಂದು ಪ್ರಶ್ನೆಗೂ ಗಾಂಧೀಜಿ ಉತ್ತರಿಸಲೇಬೇಕೆಂಬ ಒತ್ತಾಯವೂ ಇತ್ತು. ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿಯವರಿಗೆ ಕೋಪ ಬಂತು.  ಅದನ್ನು ಬಾಪೂಜಿಗೆ ತೋರಿಸಿ ಹರಿದುಹಾಕಬೇಕೆಂದುಕೊಂಡರು.
 ಗುರುರಾಜ ಕರ್ಜಗಿ
ಆದರೆ ಗಾಂಧೀಜಿ ಅದನ್ನು ಮುಖ್ಯವಾದ ಪತ್ರವೆಂಬಂತೆ ತಾಳ್ಮೆಯಿಂದ ಓದಿದರು. ಅದರಲ್ಲಿ ಅನೇಕ ಪ್ರಶ್ನೆಗಳು. ಅವುಗಳಲ್ಲಿ ಕೆಲವು ಗಾಂಧೀಜಿಗೆ ನೋವು ಉಂಟುಮಾಡುವಂಥವು, ಕೆಲವು ಅವರ ತತ್ವಗಳನ್ನು ಬಲವಾಗಿ ವಿರೋಧಿಸುವಂಥವು ಇದ್ದವು.  ಗಾಂಧೀಜಿ ಸ್ವತ: ತಾವೇ ಪ್ರತಿಯೊಂದು ಪ್ರಶ್ನೆಗೂ ಉತ್ತರ ಬರೆದರು.

ಇದು ಮಹಾದೇವ ದೇಸಾಯಿಯವರಿಗೆ ಸರಿ ಕಾಣಲಿಲ್ಲ,  ಬಾಪೂ, ರಣಛೋಡದಾಸರು ನಮ್ಮೆಲ್ಲರ ಮನಸ್ಸಿಗೆ ನೋವಾಗುವಂತೆ ಉದ್ದೇಶಪೂರ್ವಕವಾಗಿ ಬರೆದಿದ್ದಾರೆ. ನೀವು ಆ ಪತ್ರಕ್ಕೆ ಅಷ್ಟೊಂದು ಮಹತ್ವ ನೀಡಿ ಉತ್ತರ ಬರೆದಿದ್ದು ನನಗೆ ಸರಿ ಕಾಣುವುದಿಲ್ಲ  ಎಂದರು.  ಆಗ ಗಾಂಧೀಜಿ ಹೇಳಿದರು,  ಮಹಾದೇವ, ರಣಛೋಡದಾಸರು ನನಗೆ ತುಂಬ ಅವಶ್ಯವಾಗಿದ್ದಾಗ ಸಹಾಯ ಮಾಡಿದ್ದಾರೆ.  ನಾನು ಕೊನೆಯ ಉಸಿರು ಇರುವ ತನಕ ಅವರು ಮಾಡಿದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ

ಮಹಾದೇವ ಬಾಪೂಜಿ ಬರೆದ ಪತ್ರವನ್ನು ನೋಡಿದರು. ಪತ್ರವನ್ನು  ಗೌರವಾನ್ವಿತರಾದ ರಣಛೋಡದಾಸಭಾಯಿ  ಎಂದು ಪ್ರಾರಂಭಿಸಿ ಕೊನೆಗೆ  ಮೋಹನದಾಸನ ಪ್ರಣಾಮಗಳು  ಎಂದು ಮುಗಿಸಿದ್ದರು. ಮಹಾದೇವ ಕುತೂಹಲದಿಂದ ಕೇಳಿದರು,  ತಾವು ಇಷ್ಟು ಗೌರವದಿಂದ ಬರೆದಿರುವುದರಿಂದ ಅವರು ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರಾಗಿರಬೇಕಲ್ಲ?  ಗಾಂಧೀಜಿ, ಇಲ್ಲ, ಅವರು ನನಗಿಂತ ಏಳೆಂಟು ವರ್ಷ ದೊಡ್ಡವರು.  ಆದರೆ ಅವರು ನನಗೆ ಮಾಡಿದ ಸಹಾಯಕ್ಕೆ ನಾನು ಅವರನ್ನು ಹಿರಿಯಣ್ಣ ಎಂದೇ ಭಾವಿಸಿದ್ದೇನೆ. ನಾನು ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹೋದಾಗ ಇವರ ಅಣ್ಣನ ಮನೆಯಲ್ಲಿಯೇ ಇದ್ದೆ. ಆಗ ರಣಛೋಡದಾಸಭಾಯಿ ನನ್ನನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದರು.

 ಮುಂದೆ ನಾನು ಮುಂಬೈಗೆ ಹೋಗುವಾಗ ಐದು ಸಾವಿರ ರೂಪಾಯಿಗಳನ್ನು ನೀಡಿದ್ದರು. ಈ ಸಹಾಯವಿಲ್ಲದಿದ್ದರೆ ನಾನು ಮುಂಬೈಯಲ್ಲಿ ನೆಲೆಸುವ ಮತ್ತು ನಂತರ ಪರದೇಶಕ್ಕೆ ಹೋಗುವ ವಿಚಾರ ಕನಸಾಗಿಯೇ ಉಳಿಯುತ್ತಿತ್ತು  ಎಂದರು.

ಅದು ಸರಿ, ಆದರೆ ಈಗ ಅವರು ನಿಮಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲವಲ್ಲ? ಬದಲಾಗಿ ನಿಮಗೆ ಇರಿಸುಮುರಿಸಾಗುವಂಥ ಮಾತುಗಳನ್ನೇ ಆಡುತ್ತಿದ್ದಾರೆ  ಕೇಳಿದರು ಮಹಾದೇವ. ಆಗ ಗಾಂಧೀಜಿ ಭಾವಾವೇಶದಿಂದ ಮಾತನಾಡಿದರು. ಅವರ ಧ್ವನಿ ನಡುಗುತ್ತಿತ್ತು.

ಅವರು ಈಗ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ.  ಆದರೆ ಒಂದು ಕಾಲಕ್ಕೆ ನನಗೆ ಅವಶ್ಯವಾಗಿದ್ದಾಗ ಕೈ ಹಿಡಿದಿದ್ದಾರೆ.  ಇಂದು ನಾನೇನು ಆಗಿದ್ದೀನೋ ಅದಕ್ಕೆ ತಳಪಾಯ ಹಾಕಿದವರು ಅವರು.  ಅವರನ್ನು ನಾನು ಎಂದಿಗೂ ಮರೆಯಲಾರೆ  ಎಂದರು. ಈ ಮಾತುಗಳನ್ನು ಕೇಳುತ್ತಿದ್ದ ಮಹಾದೇವ ದೇಸಾಯಿ ಮತ್ತು ವಲ್ಲಭಭಾಯಿ ಪಟೇಲರಿಗೆ ಆಶ್ಚರ್ಯವಾಯಿತು.

ಉಪಕಾರ ಸ್ಮರಣೆ ಮನುಷ್ಯರನ್ನು ಬೇರೆ ಪ್ರಾಣಿಗಳಿಂದ ಬೇರ್ಪಡಿಸುತ್ತದಂತೆ.  ಪ್ರಾಣಿಗಳೂ ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಆದರೆ ಕೆಲವು ಮನುಷ್ಯರ ಆಕಾರದಲ್ಲಿರುವವರಿಗೆ ಆ ಪ್ರಜ್ಞೆಯೇ ಇಲ್ಲ ಎನ್ನಿಸುತ್ತದೆ.  ಯಾರು ತಮ್ಮನ್ನು ಎತ್ತರಕ್ಕೆ ಒಯ್ದರೋ, ಯಾರು ನೆಲೆ ಕೊಟ್ಟರೋ, ಯಾರು ಸಮಾಜದಲ್ಲಿ ಸ್ಥಾನ ನೀಡಿದರೋ ಅಂಥವರ ಕತ್ತನ್ನೇ ಅತ್ಯಂತ ಸರಿಯಾದ ಸಮಯದಲ್ಲಿ ಕತ್ತರಿಸಿ ಮತ್ತೆ ಮೊಸಳೆ ಕಣ್ಣೀರು ಸುರಿಸಿ ಜನರ ಅನುಕಂಪೆಯನ್ನು ಬಯಸುತ್ತಾರೆ. ಕತಜ್ಞತೆ ಇಲ್ಲದ ಮನುಷ್ಯನಷ್ಟು ಅಪಾಯಕಾರಿ ವಸ್ತು ಮತ್ತೊಂದಿಲ್ಲ.


 ಕೃಪೆ - ಪ್ರಜಾವಣಿ

No comments:

Post a Comment