ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, March 11, 2013

ಸುಭಾಷರ ಜನ್ಮದಿನವೂ ಕಾಡುವ ಸಾವಿನ ಸಂಕಟ - ಪ್ರತಾಪ ಸಿಂಹ


ಕೃಪೆ : http://pratapsimha.com/2013/01/30/bos/




Mr. Subhas Chandra Bose is dead!
ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ”.
ಆದರೆ…
ಈ ಕುರಿತು ಜಪಾನ್ ಸರ್ಕಾರವಾಗಲಿ, ಅಲ್ಲಿನ ರಾಜಪ್ರಭುತ್ವಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ, ಪ್ರಕಟಣೆ ಹೊರಡಿಸಲಿಲ್ಲ! ಒಂದು ವೇಳೆ ಜಪಾನ್ ರಾಜತಾಂತ್ರಿಕ ಕಾರಣಗಳಿಗಾಗಿ ಈ ಸುದ್ದಿಯನ್ನು ಮುಚ್ಚಿಟ್ಟಿತೆಂದು ನಂಬೋಣವೆಂದುಕೊಂಡರೂ ಅದಷ್ಟು ಸುಲಭವಿರಲಿಲ್ಲ. ಏಕೆಂದರೆ ನೇತಾಜಿ ಜೊತೆಗೆ ಜಪಾನಿ ಸೈನ್ಯದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದ್ದರು ಅಂತ ರೇಡಿಯೋ ಟೋಕಿಯೋ ಬಿತ್ತರಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲಸಮಯದ ಹಿಂದಷ್ಟೆ ಕ್ವಾಂಟುಂಗ್ ಪ್ರಾಂತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸರ್ಕಾರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟಿದ್ದು ಸಂಶಯ ತರಿಸುತ್ತದೆ.
ಹಾಗಾದರೆ ನಿಜಕ್ಕೂ ನಡೆದಿದ್ದೇನು?
1945 ಆಗಸ್ಟ್ ಇಪ್ಪತ್ಮೂರನೇ ತಾರೀಕು ‘ರೇಡಿಯೋ ಟೋಕಿಯೋ’ದ ಉದ್ಘೋಷಕ ಓದಿದ ಸುದ್ದಿಯನ್ನು ಎರಡು ದಿನದ ಹಿಂದೆಯೇ ಬರೆಯಲಾಗಿತ್ತು! ಅಂದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ಸಿದ್ಧವಾಗಿತ್ತು. ಆಶ್ಚರ್ಯವೆಂದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಹೆಸರು ಎಸ್. ವಿ. ಅಯ್ಯರ್! ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ ‘ಇಂಡಿಯನ್ ನ್ಯಾಶನಲ್ ಆರ್ಮಿ’ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತಂತ್ರ ಭಾರತದ ಕನಸು ಕಂಡಿದ್ದ ನೇತಾಜಿ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ್ದ ‘ಆಜಾದ್ ಹಿಂದ್ ರಾಷ್ಟ್ರೀಯಯ ಬ್ಯಾಂಕ್‌’ನ ಮುಖ್ಯಸ್ಥನೂ ಆಗಿದ್ದ. ನೇತಾಜಿಯವರ ನಂಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದನೆಂಬುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಆ ಸುದ್ದಿ ಬರೆಯೋದಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂದರೆ ಆಗಸ್ಟ್ 17ನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‌ಗೆ ಬಂದಿದ್ದ. ಅಲ್ಲಿಂದ ನೇತಾಜಿ ತೈಪೆಗೆ ಬಂದಾಗ ಅಯ್ಯರ್ ಜೊತೆಗಿರಲಿಲ್ಲ. ಸೈಗಾನ್‌ನಲ್ಲಿದ್ದ ಅಯ್ಯರ್‌ನನ್ನು ಟೋಕಿಯೋಗೆ ಕರೆಸಿಕೊಳ್ಳಲಾಗಿತ್ತು. ಆಗ ಆತನ ಜೊತೆಗಿದ್ದಿದ್ದು ಜಪಾನೀ ಸೇನಾಧಿಕಾರಿ ಕರ್ನಲ್ ಟಾಡಾ. ನೇತಾಜಿಯ ಆಜಾದ್ ಹಿಂದ್ ಸರ್ಕಾರದ ವಾರ್ತಾ ಮಂತ್ರಿಯೇ ಮಂತ್ರಿಯೇ ಖುದ್ದು ಬರೆದ ನೇತಾಜಿ ಸಾವಿನ ಸುದ್ದಿಯೇ ಜಗತ್ತಿನಾದ್ಯಂತ ಪತ್ರಿಕಾ ಮತ್ತು ರೇಡಿಯೋ ಕಚೇರಿಗಳಿಗೆ ತಲುಪಿದವು. ಈ ಕೆಲಸ ಮಾಡಿದ್ದು ಆ ಕಾಲದ ಜಪಾನಿನ ವಾರ್ತಾ ಸಂಸ್ಥೆ ‘ಡೊಮೈ ನ್ಯೂಸ್ ಏಜೆನ್ಸಿ’.


ಆ ಸಮಯದಲ್ಲಿ ಸುಭಾಷ್ ಚಂದ್ರ ಬೋಸರು ಬ್ರಿಟಿಷರಿಗೆ ಸಡ್ಡು ಹೊಡೆದು ‘ಆಜಾದ್ ಹಿಂದ್‌’ ಎಂಬ  ಪರ್ಯಾಯ ಸರಕಾರವನ್ನು ನಡೆಸುತ್ತಿದ್ದರು. ಅದೇ ಸರ್ಕಾರದಲ್ಲಿ ವಾರ್ತಾ ಮಂತ್ರಿಯಾಗಿದ್ದ ಅಯ್ಯರ್ ತನ್ನ ಪರಮೋಚ್ಛ ನಾಯಕ ಸಾವಿನ ಸುದ್ದಿಯನ್ನು ಅದು ಯಾಕೆ ಬರೆದ? ಟೋಕಿಯೋಗೆ ಬಂದ ಮೇಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನೇತಾಜಿ ಸತ್ತರೆಂಬ ಸಾಲುಗಳನ್ನು ಬರೆಯುವ ಮೊದಲು ಅಯ್ಯರ್ ಸುದ್ದಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ ಯಾಕೆ?  ವಿಮಾನ ಅಪಘಾತಕ್ಕೀಡಾಯಿತು ಅಂತ ಹೇಳಲಾದ ತೈಪೆಯಲ್ಲೂ ಅಯ್ಯರ್ ಆ ಸಮಯದಲ್ಲಿ ಇರಲಿಲ್ಲ. ಹಾಗಾಗಿ ಸುದ್ದಿ ಬರೆಯುವ ವೇಳೆ ಅಯ್ಯರ್‌ಗಿದ್ದ ಏಕಮಾತ್ರ ಸುದ್ದಿಮೂಲವೆಂದರೆ ಜಪಾನೀ ಅಧಿಕಾರಿಗಳ ಹೇಳಿಕೆ ಮಾತ್ರ. ಇನ್ನೊಂದು ಆಶ್ಚರ್ಯವೆಂದರೆ ಇದು ತೈಪೆಯಲ್ಲಿ ಸುದ್ದಿಯಾಗಲೇ ಇಲ್ಲ!
ಇತ್ತ ಭಾರತದಲ್ಲಿ ನೇತಾಜಿಯ ಸಾವಿನ ಸುದ್ದಿ ಅವರ ಅಸಂಖ್ಯ ಅಭಿಮಾನಿಗಳಿಗೆ ಆಘಾತಕಾರಿಯಾಗಿತ್ತು, ದೇಶವೇ ಅಲ್ಲೋಲಕಲ್ಲೋಲವಾಗಿತ್ತು. ಇಲ್ಲಿ ಈ ಬಗ್ಗೆ ಮೊದಲು ವರದಿ ಮಾಡಿದ್ದು ‘ಹಿಂದುಸ್ತಾನ್ ಟೈಮ್ಸ್‌’ ಪತ್ರಿಕೆ. ಅದು ಆಗಸ್ಟ್ 25ರಂದು ಪ್ರಕಟಿಸಿದ ಸುದ್ದಿಯ ಮೂಲವೂ ಜಪಾನಿನ “ಡೊಮೈ ನ್ಯೂಸ್ ಏಜೆನ್ಸಿ”ಯದ್ದೇ ಆಗಿತ್ತು. ಆದರೆ ಈ ಪತ್ರಿಕೆ ಕೂಡಾ ವರದಿ ಸಂಪೂರ್ಣ ಸತ್ಯವೆಂಬಂತೇನೂ ಪ್ರಕಟಿಸಲಿಲ್ಲ. ಅದಕ್ಕಾಗಿಯೇ ಏನೋ ಅದು ಕೊಟ್ಟ ಹೆಡ್‌ಲೈನ್ “ರಿಪೋರ್ಟೆಡ್ ಡೆತ್ ಆಫ್ ಸುಭಾಷ್ ಬೋಸ್‌”! ವರದಿಯ ಕೊನೆಯಲ್ಲೊಂದು ಚಿಕ್ಕ ಟ್ವಿಸ್ಟ್ ಇತ್ತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿರುವ ಹಿಂದುಸ್ತಾನ್ ಟೈಮ್ಸ್, ‘ಜಪಾನೀಯರು ತಿಳಿಸಿದಂತೆ ಒಂದು ವೇಳೆ ನೇತಾಜಿಯ ಸಾವಿನ ಸುದ್ದಿ ನಿಜವೇ ಆಗಿದ್ದರೆ ಅದರಿಂದ ಕೋಟ್ಯಂತರ ಭಾರತೀಯ ಮನಸುಗಳಿಗೆ ಘಾಸಿಯಾಗುತ್ತದೆ. ಆದರೆ ಅದೇ ವೇಳೆಗೆ ಬ್ರಿಟಿಷ್ ಪ್ರಭುತ್ವಕ್ಕೆದುರಾಗಿದ್ದ ಬಹಳ ದೊಡ್ಡ ಸಂಕಟವೊಂದು ನಿವಾರಣೆಯಾಯ್ತು….” ಎಂದು ಷರಾ ಬರೆದಿತ್ತು.
ಅಂದರೆ ಒಂದು ವೇಳೆ ನೇತಾಜಿ ಬದುಕಿದ್ದರೆ ಅದರಿಂದ ಬ್ರಿಟಿಷ್ ಸರ್ಕಾರಕ್ಕೆ ಬಹಳ ದೊಡ್ಡ ವಿಪತ್ತು ಎದುರಾಗುತ್ತಿತ್ತು ಎಂಬುದು ನಿಚ್ಚಳವಾಯ್ತು. ಇದೇ ವೇಳೆಗೆ ಭಾರತದಲ್ಲಿ ನೇತಾಜಿ ಸಾವಿನ ಬಗ್ಗೆ ಜನ ಸಂಶಯ ವ್ಯಕ್ತಪಡಿಸತೊಡಗಿದರು. ಬಹುಶಃ ಜಪಾನೀಯರೇ ನೇತಾಜಿಯವರು ಭೂಗತರಾಗಲು ಸಹಕರಿಸಿರಬಹುದು. ಆ ಮೂಲಕ ಮಿತ್ರರಾಷ್ಟ್ರಗಳ ಮೇಲೆ ಯುದ್ಧ ಸಾರಿದ ತಪ್ಪಿಗಾಗಿ ದೊರಕುವ ಶಿಕ್ಷೆಯಿಂದ ನೇತಾಜಿಯವರನ್ನು ಪಾರು ಮಾಡಲು ಜಪಾನಿ ಸೈನ್ಯಾಧಿಕಾರಿಗಳೇ ಈ ಸುಳ್ಳು ಹಬ್ಬಿಸಿರಬಹುದೆಂಬ ಒಂದು ವಾದವೂ ಕೇಳಿಬಂತು. ಇಂಥದ್ದೊಂದು ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಇಂಗ್ಲಿಷ್ ದೈನಿಕ ‘ದಿ ಹಿಂದು’ ಈ ಬಗ್ಗೆ ನೇರವಾಗಿ ಬರೆಯಲಿಲ್ಲ. ಬದಲಿಗೆ ಅದು ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ನೇತಾಜಿ ಸಾವಿನ ಸುದ್ದಿಯನ್ನು ನಂಬಲಿಲ್ಲ ಅಂತನ್ನೋ ರೀತಿಯ ವರದಿ ಬರೆಯಿತು. ಇದೇ ರೀತಿಯ ವರದಿಯನ್ನು ಹಿಂದುಸ್ತಾನ್ ಟೈಮ್ಸ್ ಕೂಡಾ ಪ್ರಕಟಿಸಿತು. ‘ಬೋಸ್ ಡೆಡ್, ಸ್ಟೋರಿ ನಾಟ್ ಬಿಲೀವ್ಡ್ ಇನ್ ಲಂಡನ್‌’ ಎಂಬ ಹೆಡ್ಡಿಂಗ್‌ನ ಈ ವರದಿಯಲ್ಲಿ ಒಂದು ಅತ್ಯಂತ ಮಹತ್ವದ ಸಂಗತಿಯನ್ನು ಉಲ್ಲೇಖಿಸಲಾಗಿತ್ತು. ಅದೇನೆಂದರೆ ಹಿಂದೊಮ್ಮೆ ಸುಭಾಷ್‌ಶ್ಚಂದ್ರ ಬೋಸ್‌ರು ಜರ್ಮನಿಯಿಂದ ನಾಪತ್ತೆಯಾದಾಗಲೂ ಜಪಾನ್ ಇದೇ ರೀತಿಯ ಸುದ್ದಿ ಹಬ್ಬಿಸಿತ್ತು. ಆದರೆ ಬಳಿಕ ನೇತಾಜಿ ಟೋಕಿಯೋದಲ್ಲಿ ಪ್ರತ್ಯಕ್ಷವಾಗಿದ್ದರು. ಈ ಘಟನೆಯನ್ನೇ ಉಲ್ಲೇಖಿಸಿ ತರ್ಕ ಮುಂದಿಟ್ಟ ಪತ್ರಿಕೆ ‘ಜಪಾನಿ ಸುದ್ದಿ ಸಂಸ್ಥೆಗಳಿಗೆ ಇಂತಹ ಚಾಳಿಯಿದೆ. ಈ ಬಾರಿ ನೇತಾಜಿ ಸಾವಿನ ಸುದ್ದಿಯು ಹೊರಬಂದ ಕಾಲ ಬಹಳ ಪರಿಪಕ್ವವಾಗಿದೆ. ಈ ಸುದ್ದಿ ಕಪೋಲಕಲ್ಪಿತವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಬಹುಶಃ ನೇತಾಜಿಯವರೇ ಮಿತ್ರ ರಾಷ್ಟ್ರಗಳ ಸೇನೆಯಿಂದ ಸುಲಭವಾಗಿ ಪಾರಾಗಲು ಯೋಚಿಸಿರಬಹುದೇ?’ ಎಂಬ ಸಂಶಯವನ್ನೂ ವರದಿ ವ್ಯಕ್ತಪಡಿಸಿತ್ತು!
ಆದರೆ ನೇತಾಜಿ ಸಾವಿನ ಸುದ್ದಿಯ ಬಗ್ಗೆ ಮಹಾತ್ಮ ಗಾಂಧಿ ತಕ್ಷಣಕ್ಕೆ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? “ಸುಭಾಷ್ ಬೋಸ್ ಸತ್ತಿದ್ದಾರೆಂಬುದು ನಿಜವಾಗಿದ್ದರೂ ಆತ ನಿಸ್ಸಂಶಯವಾಗಿಯೂ ಮಹಾನ್ ದೇಶಭಕ್ತ. ಆದರೆ ಆತ ತಪ್ಪುದಾರಿ ಹಿಡಿದಿದ್ದ! ಇತ್ತ “ನಮ್ಮೊಳಗಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾನು ನೇತಾಜಿಯವರ ಬಗ್ಗೆ ಅತೀವವಾದ ಗೌರವಭಾವನೆ ಹೊಂದಿದ್ದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ” ಎಂದುಬಿಟ್ಟರು ನೆಹರು ಮಹಾಶಯರು!
ಭಾರತಕ್ಕೆ ಸ್ವಾತಂತ್ರ್ಯ ಬಂದ ಕ್ಷಣದಲ್ಲೂ ಸುಭಾಶರನ್ನು ಕಳೆದುಕೊಂಡ ಸೂತಕ ದೇಶವನ್ನು ಆವರಿಸಿತ್ತು. ಸಾವಿನ ರಹಸ್ಯವನ್ನು ಭೇದಿಸುವಂತೆ ನೆಹರು ಸರ್ಕಾರದ ಮೇಲೆ ಒತ್ತಡ ಬಿತ್ತು. ಹಾಗಾಗಿ 1956ರಲ್ಲಿ ಶಾ ನವಾಝ್ ಸಮಿತಿ ರಚನೆಯಾಯಿತು. ಬೋಸರು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಂದರೆ ನಾನೇ ಅದರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಿದ್ದ ನೆಹರು ರಚಿಸಿದ ಸಮಿತಿಯಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? “ವಿಮಾನ ಅಪಘಾತದಲ್ಲಿ ಮಡಿದರು” ಎಂದು ಷರಾ ಬರೆಯಿತು ಶಾ ನವಾಝ್ ಸಮಿತಿ. ಆದರೆ ಒತ್ತಡ ನಿಲ್ಲಲಿಲ್ಲ. ಅದಕ್ಕೆ ಮಣಿದ ನೆಹರು ಪುತ್ರಿ ಇಂದಿರಾ ಗಾಂಧಿಯವರು ಖೋಸ್ಲಾ ಸಮಿತಿ ರಚಿಸಿ, ಅದರ ಕೈಯಿಂದಲೂ “ಮಡಿದರು” ಎಂದು ಬರೆಸಿ ಕಣ್ಣೊರೆಸಲು ಯತ್ನಿಸಿದರೂ ಜನ ನಂಬಲಿಲ.್ಲ ಕೊನೆಗೆ 1998, ಏಪ್ರಿಲ್ 30ರಂದು ಕೋಲ್ಕತಾ ಹೈಕೋರ್ಟ್, “ವಿವಾದಕ್ಕೆ ಅಂತ್ಯ ಕಾಣಿಸುವಂಥ ಒಂದು ಕೂಲಂಕಷ ಶೋಧನೆ, ಪರಾಮರ್ಶೆ ಮಾಡುವ ಆಯೋಗ ರಚನೆ ಮಾಡಿ” ಎಂದು ಆಗಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆದೇಶ ನೀಡಿತು. 1999ರಲ್ಲಿ ಅಟಲ್ ಸರ್ಕಾರ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ರಚನೆ ಮಾಡಿತು. ಅದು 2006ರಲ್ಲಿ ತನ್ನ ವರದಿ ನೀಡಿತು, ಆದರೆ ಅಷ್ಟರೊಳಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ವರದಿಯನ್ನೇ ತಿರಸ್ಕಾರ ಮಾಡಿಬಿಟ್ಟಿತು!
ಏಕೆ ಗೊತ್ತಾ?
ಶಾ ನವಾಝ್, ಖೋಸ್ಲಾ ಸಮಿತಿಗಳಂತೆ ನೆಹರು ಕುಟುಂಬಕ್ಕೆ ‘ಬೇಕಾದ’ ವರದಿಯನ್ನು ಮುಖರ್ಜಿ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ 1945 ಆಗಸ್ಟ್ 18ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥದ್ದೊಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎಂಬ ಸತ್ಯವನ್ನು ಹೊರಹಾಕಿತ್ತು!! ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!!! ಈ ವರದಿಯನ್ನು ಆಧರಿಸಿ ನೇತಾಜಿ ಸೇನೆಯಲ್ಲಿದ್ದ ಮನ್ವತಿ ಆರ್ಯ ಅವರು “Judgement: No Aircrash, NO Death” ಎಂಬ ಪುಸ್ತಕ ಹೊರತಂದಿದ್ದಾರೆ. 2007ರಲ್ಲಿ ನೇತಾಜಿ ಬಗ್ಗೆ “Patriot” ಎಂಬ ಪುಸ್ತಕವನ್ನೂ ಬರೆದಿದ್ದರು. “ನೇತಾಜಿ ಸತ್ತಿದ್ದು ಭಾರತದಲ್ಲೇ ಹೊರತು, ವಿಮಾನ ಅಪಘಾತದಲ್ಲಲ್ಲ; ಬ್ರಿಟಿಷರನ್ನು ಹೊರದಬ್ಬಿದ್ದು ಗಾಂಧಿಯಲ್ಲ, ಬೋಸ್‌” ಎಂದು ಕಳೆದ ವರ್ಷ ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಕೂಡ ಬರೆದಿದ್ದರು. ಈ ಮೇಲಿನ ಪುಸ್ತಕಗಳು, ಮುಖರ್ಜಿ ಆಯೋಗದ ವರದಿ ಹಾಗೂ ಇತರ ದಾಖಲೆಗಳನ್ನು ಆಧರಿಸಿ ಸುಭಾಷ್ ಜನ್ಮ ದಿನವಾದ ಇಂದು(ಜನವರಿ 23) ಅವರ ಸಾವಿನ ರಹಸ್ಯವನ್ನು ಭೇದಿಸುವ ಪುಸ್ತಕ ಹೊರತರಲು ನಾನೂ ನಿರ್ಧರಿಸಿದ್ದೆ.  ಈ ಮಧ್ಯೆ, ಜನವರಿ 8ರಂದು ಕೋಲ್ಕತಾದ “ಸ್ಟೇಟ್ಸ್‌ಮನ್‌” ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು ಬೋಸ್ ಬದುಕು-ಸಾವಿಗೆ ಸಂಬಂಧಿಸಿದ “33 ಕ್ಲಾಸಿಫಯ್ಡ್(ಗೌಪ್ಯ) ದಾಖಲೆ”ಗಳನ್ನು ನೀಡುವಂತೆ ಬೋಸ್ ಕುಟುಂಬದ 30 ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ! ಎಲ್ಲ ಕಾರಣ, ದಾಖಲೆ, ಮಾಹಿತಿಗಳನ್ನು ಹೊಂದಿದ ಸಮಗ್ರ ಪುಸ್ತಕವನ್ನು ಇನ್ನೊಂದು ತಿಂಗಳೊಳಗಾಗಿ ನಿಮ್ಮ ಕೈಗಿಡುತ್ತೇನೆ.
ಇದೇನೇ ಇರಲಿ, ‘Give me blood and I will give you freedom ಎನ್ನುತ್ತಿದ್ದ, ಅಂಡಮಾನ್ ನಿಕೋಬಾರ್‌ಗಳನ್ನು ವಶಕ್ಕೆ ತೆಗೆದುಕೊಂಡು ಶಹೀದ್, ಸ್ವರಾಜ್ ಎಂಬ ಹೆಸರಿಟ್ಟು ಈ ದೇಶದ ಭೂಭಾಗವನ್ನು ಮೊದಲಿಗೆ ದಾಸ್ಯಮುಕ್ತವಾಗಿಸಿದ ಭಾರತಾಂಬೆಯ ಧೀರ ಪುತ್ರ ಏನಾದ ಎಂಬುದೇ ದೇಶವಾಸಿಗಳಿಗೆ ತಿಳಿದಾಗಿರುವುದು ಎಂತಹ ವಿಪರ್ಯಾಸವಲ್ಲವೆ? ಆ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಇಂದು ಅಂಥ ಸುಪುತ್ರ ನಮ್ಮ ನೆಲದಲ್ಲಿ ಜನಿಸಿದನಲ್ಲಾ ಎಂಬ ಖುಷಿಗಿಂತ ಸಾವಿನ ಸಂಟಕವೇ ಹೆಚ್ಚು ಕಾಡುತ್ತದೆ!

No comments:

Post a Comment