ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, July 17, 2011

ಶಿವರಾತ್ರಿ

ಶಿವನಿಗ್ಯಾವುದು ಹಗಲು? ಯಾವುದವನಿಗೆ ರಾತ್ರಿ?
ನಿತ್ಯ ಜಂಗಮ ಮೂರ್ತಿಗಿರುಳು ಹಗಲಿನ ಫರಕು
ಇಲ್ಲ, ಹಗಲಾದಾಗ ಇಲ್ಲಿ, ಅಮೆರಿಕೆಯಲ್ಲಿ
ನಟ್ಟಿರುಳು. ಹಗಲರ್ಧ ; ಇರುಳರ್ಧ-ಅರ್ಧನಾ
ರೀಶ್ವರಗೆ. ಈ ಶಿವರಾತ್ರಿ ಎನ್ನುವುದೆ ಪಾರ್ವತಿ.
ಚಂದ್ರದಂಡೆಯ ಮುಡಿದು, ನಕ್ಷತ್ರನೆಕ್ಲೇಸ
ಧರಿಸಿರುವ ನಗೆಮುಗುಳ ಕಾಳಿ, ಶಂಕರನರಸಿ.
ಕೈಲಾಸಲಾಸ್ಯ ಮಾನಸದ ಕನ್ನಡಿಯಲ್ಲಿ.

ಚಂದ್ರಬೋಗಣಿ ತುಂಬ ತುಳುಕಾಡುತಿರೆ ಇರುಳು.
ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
ನಿಂತು ಮೆಲ್ದನಿಯಲ್ಲಿ ಉಸುರಿದನು : "ಶಂಕರೀ...
ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
ನನ್ನಧರಪಾತ್ರೆಯೇ, ಬಿಲ್ವವನಧಾತ್ರಿಯೇ,
ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ!"

-ಎಚ್. ಎಸ್. ವೆಂಕಟೇಶಮೂರ್ತಿ

No comments:

Post a Comment